ಮಂಗಳೂರು: ಸೆಪ್ಟೆಂಬರ್ 7 ರಂದು ಖಗ್ರಾಸ ಚಂದ್ರಗ್ರಹಣವು ಸಂಭವಿಸಲಿದ್ದು, ಅಂದು ರಾತ್ರಿ ಸುಮಾರು 9:57ಕ್ಕೆ ಚಂದ್ರಗ್ರಹಣವು ಆರಂಭವಾಗಲಿದೆ. 11 ಗಂಟೆಯಿಂದ ಚಂದ್ರನು ಸಂಪೂರ್ಣವಾಗಿ ಭೂಮಿಯ ಗಾಢ ನೆರಳಿನಲ್ಲಿ ಮರೆಯಾಗುತ್ತಾನೆ. ಈ ಕ್ಷಣದಿಂದ ಮಧ್ಯರಾತ್ರಿ 12:22 ರವರೆಗೆ (ಸುಮಾರು 1 ಗಂಟೆ 22 ನಿಮಿಷ) ಖಗ್ರಾಸ ಚಂದ್ರಗ್ರಹಣವನ್ನು ವೀಕ್ಷಿಸಬಹುದು. ರಾತ್ರಿ ಸುಮಾರು 1:26ಕ್ಕೆ ಗ್ರಹಣವು ಮುಕ್ತಾಯಗೊಳ್ಳಲಿದ್ದು, ಈ ವಿದ್ಯಮಾನವನ್ನು ಬರಿಗಣ್ಣಿನಿಂದ ನೋಡಬಹುದು. ಈ ಸಮಯದಲ್ಲಿ ಭೂಮಿಯ ವಾತಾವರಣದ ಮೂಲಕ ಹಾದುಹೋಗುವ ಸೂರ್ಯನ ಕಿರಣಗಳ ಚದುರುವಿಕೆಯಿಂದ ಚಂದ್ರನು ತಾಮ್ರದಂತೆ ರಕ್ತವರ್ಣದಲ್ಲಿ ಕಂಡುಬರುತ್ತಾನೆ.
ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದಲ್ಲಿ ರಾತ್ರಿ 9 ಗಂಟೆಯಿಂದ ನಡುರಾತ್ರಿ 1:30 ರವರೆಗೆ ಈ ವಿಶೇಷ ಖಗೋಳ ವಿದ್ಯಮಾನವನ್ನು ವೀಕ್ಷಿಸಲು ದೂರದರ್ಶಕ ಮತ್ತು ದುರ್ಬೀನುಗಳ ವ್ಯವಸ್ಥೆ ಮಾಡಲಾಗಿದೆ. ಇದೇ ಸಂದರ್ಭದಲ್ಲಿ ಕಾಣುವ ಇತರ ಗ್ರಹಗಳು, ನಕ್ಷತ್ರಗಳು ಮತ್ತು ನಕ್ಷತ್ರ ಸಮೂಹಗಳ ಬಗ್ಗೆ ವಿವರಣೆ ನೀಡಲಾಗುತ್ತದೆ. ಮಳೆ, ಮೋಡಗಳ ಅಡಚಣೆ ಇಲ್ಲದಿದ್ದಲ್ಲಿ ಆಸಕ್ತ ವೀಕ್ಷಕರು ಇದರ ಸದುಪಯೋಗ ಪಡಿಸಿಕೊಳ್ಳಬಹುದು ಎಂದು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.