ಮಂಗಳೂರು: ಪಿಲಿನಲಿಕೆ ಪ್ರತಿಷ್ಠಾನದ ಸಂಸ್ಥಾಪಕ, ಯುವನಾಯಕ ಎಂ. ಮಿಥುನ್ ರೈ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಪಿಲಿನಲಿಕೆ ಪಂಥಕ್ಕೆ ಈ ಬಾರಿ ದಶಮ ಮಹೋತ್ಸವ ಸಂಭ್ರಮ. ಈ ಹಿನ್ನಲೆಯಲ್ಲಿ ಅ.1ರಂದು ಕರಾವಳಿ ಉತ್ಸವ ಮೈದಾನದಲ್ಲಿ 'ಪಿಲಿನಲಿಕೆ ಪಂಥ-10' ಕಾರ್ಯಕ್ರಮವನ್ನು ಮತ್ತಷ್ಟು ಅರ್ಥಪೂರ್ಣ, ವೈಭವಯುತವಾಗಿ ನಡೆಸಲು ನಿರ್ಧರಿಸಲಾಗಿದ್ದು, ಈ ಬಗ್ಗೆ ಮಿಥುನ್ ರೈ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ವಿಶ್ವವಿಖ್ಯಾತ ಮಂಗಳೂರು ದಸರಾ ಮಹೋತ್ಸವ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡುತ್ತಿರುವ ಪಿಲಿನಲಿಕೆ ಪಂಥವನ್ನು ಈ ವರ್ಷದಿಂದ ಮಂಗಳೂರು ದಸರಾ ಮಹೋತ್ಸವದಲ್ಲೇ ಜೋಡಿಸಿಕೊಂಡು ಆಯೋಜಿಸಲು ಪ್ರತಿಷ್ಠಾನ ನಿರ್ಧರಿಸಿದೆ. ಕಾರ್ಯಕ್ರಮವ ನಡೆಯುವ ಸ್ಥಳದಲ್ಲಿ ಏಕಕಾಲಕ್ಕೆ 25ಸಾವಿರಕ್ಕೂ ಅಧಿಕ ಮಂದಿಗೆ ಕುಳಿತುಕೊಂಡು ಸ್ಪರ್ಧೆ ವೀಕ್ಷಣೆ ಮಾಡುವ ಆಸನ ವ್ಯವಸ್ಥೆಯನ್ನು ಮಾಡಲಾಗುವುದು. ಪಿಲಿನಲಿಕೆಯಲ್ಲಿ ಭಾಗವಹಿಸುವ ಪ್ರತಿಯೊಂದು ತಂಡಗಳಿಗೂ 20 ನಿಮಿಷ ಕಾಲಾವಕಾಶ ನೀಡಲಾಗುವುದು. ಬೆಳಗ್ಗೆ 10ಗಂಟೆಗೆ ಆರಂಭವಾಗುವ ಈ ಸ್ಪರ್ಧೆ ರಾತ್ರಿ 10ರವರೆಗೆ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಶಿವಶರಣ್ ಶೆಟ್ಟಿ ನೇತೃತ್ವದ ನಮ್ಮ ಟಿವಿ ಸಹಭಾಗಿತ್ವ ವಹಿಸುತ್ತಿದ್ದಾರೆ ಎಂದರು.
ಈ ಬಾರಿಯ ಪಿಲಿನಲಿಕೆ ಪಂಥಕ್ಕೆ ಜಿಲ್ಲೆಯ ಪ್ರತಿಷ್ಟಿತ 10 ತಂಡವನ್ನು ಆಯ್ಕೆ ಮಾಡಲು ನಿರ್ಧರಿಸಲಾಗಿದ್ದು, ತಂಡಗ ಪಟ್ಟಿಯನ್ನು ಶೀಘ್ರದಲ್ಲೇ ಬಿಡುಗಡೆ ಮಾಡಲಾಗುತ್ತದೆ ಎಂದರು. ಪಿಲಿನಲಿಕೆ ಪಂಥ ಕಾರ್ಯಕ್ರಮದ ರಾಜ್ಯದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ರಾಜ್ಯಸಭಾ ಸದಸ್ಯ ನಸೀರ್ ಹುಸೇನ್, ಜಿಲ್ಲಾ ಉಸ್ತುವಾರಿ ದಿನೇಶ್ ಗುಂಡೂರಾವ್ ಸೇರಿದಂತೆ ಸಂಸದರು, ಶಾಸಕರುಗಳು ಆಗಮಿಸಲಿದ್ದು, ಬಾಲಿವುಡ್ ನಟ ಸುನೀಲ್ ಶೆಟ್ಟಿ, ಸ್ಯಾಂಡಲ್‌ವುಡ್ ನಟರಾದ ರಿಷಬ್ ಶೆಟ್ಟಿ, ರಾಜ್ ಬಿ. ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್ ಸೇರಿದಂತೆ ಸಿನಿಮಾ. ಕ್ರೀಡಾ ಕ್ಷೇತ್ರದ ಸೆಲೆಬ್ರಿಟಿಗಳು ಆಗಮಿಸಲಿದ್ದಾರೆ ಎಂದರು.
2025ರ 'ಪಿಲಿನಲಿಕೆ-10' ಸ್ಪರ್ಧೆಯಲ್ಲಿ ಒಟ್ಟು 20ಲಕ್ಷ ರೂ. ಬಹುಮಾನ ನಿಗದಿಪಡಿಸಲಾಗಿದೆ. ಪ್ರಥಮ ಬಹುಮಾನ 10ಲಕ್ಷ ರೂ. ಮತ್ತು ಫಲಕ, ದ್ವಿತೀಯ 5ಲಕ್ಷ ರೂ. ಮತ್ತು ಫಲಕ, ತೃತೀಯ ಲಕ್ಷ ರೂ. ಬಹುಮಾನ ಮತ್ತು ಫಲಕ ನೀಡಲು ನಿರ್ಧರಿಸಲಾಗಿದೆ. ಪ್ರತಿ ತಂಡಕ್ಕೆ 50ಸಾವಿರ ರೂ. ಗೌರವ ಧನ ನೀಡಲಾಗುವುದು. ಕಪ್ಪುಹುಲಿ, ಮರಿಹುಲಿ, ತಾಸೆ ತಂಡ, ಮುಡಿ ಬಿಸಾಡುವುದು, ಬಣ್ಣಗಾರಿಕೆ ಸೇರಿದಂತೆ 6 ವೈಯಕ್ತಿಕ ಪ್ರಶಸ್ತಿಗಳಿಗೆ 50ಸಾವಿರ ಬಹುಮಾನ ಹಾಗೂ ಫಲಕ ಸಿಗಲಿದೆ ಎಂದರು.
ಪಿಲಿನಲಿಕೆ ಪಂಥಕ್ಕೆ ಈ ಬಾರಿ ದಶಮ (ಹತ್ತು) ಸಂಭ್ರಮ ಹಿನ್ನಲೆಯಲ್ಲಿ ಮೂಡುಬಿದಿರೆ ಸರಕಾರಿ ತಾಲೂಕಿನ ಶಾಲೆಯೊಂದನ್ನು ದತ್ತು ತೆಗೆದುಕೊಂಡು ಅದರ ಅಭಿವೃದ್ಧಿಗೆ ಶ್ರಮಿಸಲು ನಿರ್ಧರಿಸಲಾಗಿದೆ.
ಮಂಗಳೂರು ದಸರಾ ಮಹೋತ್ಸವದ ಕಾರ್ಯಕ್ರಮವಾಗಿ ಜೋಡಣೆ
10 ತಂಡಗಳು ಹಾಗೂ ಬಹುಮಾನ ಮೊತ್ತ 26ಲಕ್ಷ ರೂ.ಗೆ ಏರಿಕೆ
ಸಹಕಾರಿ ರತ್ನ, ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಾ.ಎಂ.ಎನ್. ರಾಜೇಂದ್ರ ಕುಮಾರ್ ಅವರಿಗೆ ಗೌರವ ಸನ್ಮಾನ
ಪತ್ರಿಕಾಗೋಷ್ಠಿಯಲ್ಲಿ ಡಾ. ಶಿವಶರಣ್ ಶೆಟ್ಟಿ, ಅವಿನಾಶ್ ಶೆಟ್ಟಿ, ವಿಕಾಶ್ ಶೆಟ್ಟಿ, ನವೀನ್ ಶೆಟ್ಟಿ ಮತ್ತು ಆನಂದ್ ರಾಜ್ ಶೆಟ್ಟಿ ಉಪಸ್ಥಿತರಿದ್ದರು