image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಸೇವಾ ಕಾರ್ಯಗಳಲ್ಲಿ ತೊಡಗಿ ಭಗವಂತನ ಕೃಪೆಗೆ ಪಾತ್ರರಾಗೋಣ - ಸ್ವಾಮಿ ಸುಹಿತಾನಂದಜಿ ಮಹಾರಾಜ್

ಸೇವಾ ಕಾರ್ಯಗಳಲ್ಲಿ ತೊಡಗಿ ಭಗವಂತನ ಕೃಪೆಗೆ ಪಾತ್ರರಾಗೋಣ - ಸ್ವಾಮಿ ಸುಹಿತಾನಂದಜಿ ಮಹಾರಾಜ್

ಮಂಗಳೂರು:  ರಾಮಕೃಷ್ಣ ಮಿಷನ್ ಮಂಗಳೂರಿನಲ್ಲಿ 75 ವರ್ಷಗಳನ್ನು ಪೂರೈಸಿರುವ ಹಿನ್ನೆಲೆಯಲ್ಲಿ ಮಂಗಳೂರು ರಾಮಕೃಷ್ಣ ಮಠದ ಆವರಣದಲ್ಲಿ ನಾಲ್ಕು ದಿನಗಳ ಕಾಲ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು. ನಾಲ್ಕನೇ ದಿನ ನಡೆದ ಸಭಾ ಕಾರ್ಯಕ್ರಮದಲ್ಲಿ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು "ರಾಮಕೃಷ್ಣ ಪರಮಹಂಸರಾಗಲೀ, ಶ್ರೀಮಾತೆ ಶಾರದಾದೇವಿಯವರಾಗಲಿ ಅಥವಾ ಸ್ವಾಮಿ ವಿವೇಕಾನಂದರಾಗಲೀ ಸಮಾಜದಲ್ಲಿ ಕಷ್ಟದಲ್ಲಿರುವ ಅಥವಾ ಬಡತನದಲ್ಲಿರುವವರಿಗೆ ಕರುಣೆ ತೋರಿ ಅವರ ಅಭ್ಯುದಯಕ್ಕಾಗಿ ಕೆಲಸ ಮಾಡಿದವರು ಈ ಚಿಂತನೆಗಳೊಂದಿಗೆ ಒಟ್ಟುಗೂಡಿ ಇಂದು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಕೆಲಸ ಮಾಡುತ್ತಿದೆ. ಹಲವಾರು ಜನ ಸನ್ಯಾಸಿಗಳಾಗಿ ಅಥವಾ ಸ್ವಯಂಸೇವಕರಾಗಿ ಕೆಲಸ ಮಾಡುತ್ತಿದ್ದಾರೆ. ಈ ನಿಟ್ಟಿನಲ್ಲಿ ನಾವು ತಾನು, ಮನ ಧನ ಪೂರ್ವಕವಾಗಿ ಇನ್ನಷ್ಟು ಉತ್ತಮ ರೀತಿಯಲ್ಲಿ ಸೇವಾ ಕಾರ್ಯಗಳಲ್ಲಿ ತೊಡಗಿಕೊಳ್ಳೋಣ ಈ ಮೂಲಕ ನಮ್ಮ ಜೀವನವನ್ನು ಪಾವನಗೊಳಿಸಿ ಭಗವಂತನ ಕೃಪೆಗೆ ಪಾತ್ರರಾಗೋಣ" ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಮಾತನಾಡಿ "ನಾನು ಇವತ್ತು ಏನಾಗಿದ್ದರೂ ಶ್ರೀ ರಾಮಕೃಷ್ಣ ಪರಮಹಂಸರ ದಯೆಯಿಂದ ಹಾಗೂ ಸ್ವಾಮೀಜಿಗಳ ಆಶೀರ್ವಾದದಿಂದ ಎಂದು ಹೇಳಲು ಖುಷಿಯಾಗುತ್ತಿದೆ. ಮಾನ್ಯ ಪ್ರಧಾನಮಂತ್ರಿಗಳ ಸ್ವಚ್ಛ ಭಾರತದ ಕರೆಗೆ ಕೈ ಜೋಡಿಸಿ ಸಮಾಜವನ್ನು ಒಟ್ಟುಗೂಡಿಸಿ ಮಂಗಳೂರು ಭಾಗದಲ್ಲಿ ಸ್ವಚ್ಛ ಮಂಗಳೂರು ಅಭಿಯಾನವನ್ನು ನಡೆಸಿದ ರೀತಿ ಎಲ್ಲರಿಗೂ ಮಾದರಿ, ಮಂಗಳೂರು ರಾಮಕೃಷ್ಣ ಮಠದ ಸ್ವಚ್ಛ ಭಾರತ ಕಾರ್ಯ ಇನ್ನೂ ಮುಂದುವರಿಯಲಿ. ಮಂಗಳೂರಿನ ಎಲ್ಲ ನಾಗರಿಕರು ಈ ಕಾರ್ಯದಲ್ಲಿ ಕೈಜೋಡಿಡುತ್ತಾರೆ ಎಂಬ ಭರವಸೆ ನನಗಿದೆ. ಓರ್ವ ಸ್ವಯಂಸೇವಕನಾಗಿ ಹಾಗೂ ಆಶ್ರಮದ ಭಕ್ತನಾಗಿ ನಾನು ಆಶ್ರಮದ ಜೊತೆಗಿರುತ್ತೇನೆ." ಎಂದರು. ಭಾರತೀಯ ಸೇನೆಯ ನಿವೃತ್ತ ಯೋಧರಾದ ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಕಾರ್ಯಕ್ರಮದಲ್ಲಿ ವಿಶೇಷ ಅಭ್ಯಾಗತರಾಗಿ ಭಾಗವಹಿಸಿದ್ದರು.

ಅಮೃತ ಭವನ ಲೋಕಾರ್ಪಣೆ

ಸುತ್ತಮುತ್ತಲಿನ ಬಡ ಹಾಗೂ ಹಿಂದುಳಿದ ವಿದ್ಯಾರ್ಥಿಗಳಿಗೆ ಉಚಿತ ತರಬೇತಿ ನೀಡುತ್ತಿರುವ ರಾಮಕೃಷ್ಣ ಮಿಷನ್ ವಿವೇಕಾನಂದ ತರಬೇತಿ ಕೇಂದ್ರದ ನೂತನ ತರಗತಿ ಹಾಗೂ ಅಮೃತ ಭವನ ಸಭಾಂಗಣವನ್ನು ಒಳಗೊಂಡ ಕಟ್ಟಡದ ಲೋಕಾರ್ಪಣೆಯನ್ನು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ಉಪಾಧ್ಯಕ್ಷರಾದ ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅವರು ನೆರವೇರಿಸಿದರು.

ಅಮೃತ ವರ್ಷದ ಕಾರ್ಯಕ್ರಮಗಳಿಗೆ ವಿದ್ಯುಕ್ತ ಚಾಲನೆ

ಮಂಗಳೂರು ರಾಮಕೃಷ್ಣ ಮಿಷನ್ ನ ಅಮೃತ ವರ್ಷದ ಹಿನ್ನೆಲೆಯಲ್ಲಿ ವರ್ಷಪೂರ್ತಿ ನಡೆಯುವ ಕಾರ್ಯಕ್ರಮಗಳಿಗೆ ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷರು ಹಾಗೂ ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್, ಬೇಲೂರು ಮಠ ಇದರ ವಿಶ್ವಸ್ಥರಾದ ಸ್ವಾಮಿ ಮುಕ್ತಿದಾನಂದಜಿ ಚಾಲನೆ ನೀಡಿದರು. ರಾಮಕೃಷ್ಣ ಮಿಷನ್ ಮಂಗಳೂರಿನ ಪತ್ರಿಕೆಯನ್ನು ಶ್ರೀಮತ್ ಸ್ವಾಮಿ ಸುಹಿತಾನಂದಜಿ ಮಹಾರಾಜ್ ಅನಾವರಣ ಗೊಳಿಸಿದರು. ಈ ಸಂದರ್ಭದಲ್ಲಿ ಮಂಗಳೂರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ನ ನೂತನ ಜಾಲತಾಣಕ್ಕೆ ಸಂಸದರಾದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅನಾವರಣಗೊಳಿಸಿದರು. ಮಂಗಳೂರು ರಾಮಕೃಷ್ಣ ಮಠ ಹಾಗೂ ರಾಮಕೃಷ್ಣ ಮಿಷನ್ ನ ಸಾಕ್ಷ್ಯಚಿತ್ರವನ್ನು ಕ್ಯಾಪ್ಟನ್ ಗಣೇಶ್ ಕಾರ್ಣಿಕ್ ಬಿಡುಗಡೆಗೊಳಿಸಿದರು.

ಸ್ವಯಂಸೇವಕರಿಗೆ ಗೌರವಾರ್ಪಣೆ

ಈ ಸಂದರ್ಭದಲ್ಲಿ ಮಿಷನ್‌ಗೆ ಸೇವೆ ಸಲ್ಲಿಸಿದ 75 ಮಂದಿ ಸ್ವಯಂಸೇವಕರಿಗೆ ಹಾಗೂ ಆಶ್ರಮದ ಕಾರ್ಯಕ್ರಮಗಳಲ್ಲಿ ಸಹಕರಿಸಿದ ಶಿಕ್ಷಣ ಸಂಸ್ಥೆಗಳಿಗೆ ಹಾಗೂ ಭಜನಾ ಮಂಡಳಿಗಳಿಗೆ ಗೌರವ ಸಲ್ಲಿಸಲಾಯಿತು. ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಸ್ವಾಗತಿಸಿ, ರಾಮಕೃಷ್ಣ ಮಿಷನ್ ಹಿರಿಯ ವಿದ್ಯಾರ್ಥಿ ಹಾಗೂ ಮಂಗಳೂರಿನ ಲೆಕ್ಕ ಪರಿಶೋಧಕಾರದ ಸಿಎ ಶಿವಕುಮಾರ್ ವಂದಿಸಿದರು. ಸ್ಥಿತಾ ಶೆಣೈ ಕಾರ್ಯಕ್ರಮ ನಿರ್ವಹಿಸಿದರು.

Category
ಕರಾವಳಿ ತರಂಗಿಣಿ