image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾ‌ರ್ ನೇತೃತ್ವದಲ್ಲಿ ನಡೆದ ಧರ್ಮಜಾಗೃತಿ ಯಾತ್ರೆಯಲ್ಲಿ ಅಪಾರ ಸಹಕಾರಿಗಳು ಭಾಗಿ

ಶ್ರೀ ಕ್ಷೇತ್ರ ಧರ್ಮಸ್ಥಳದ ಮೇಲೆ ನಡೆಯುತ್ತಿರುವ ಅಪಪ್ರಚಾರದ ವಿರುದ್ಧ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾ‌ರ್ ನೇತೃತ್ವದಲ್ಲಿ ನಡೆದ ಧರ್ಮಜಾಗೃತಿ ಯಾತ್ರೆಯಲ್ಲಿ ಅಪಾರ ಸಹಕಾರಿಗಳು ಭಾಗಿ

ಧರ್ಮಸ್ಥಳ:  ಶ್ರೀ ಧರ್ಮಸ್ಥಳ ಕ್ಷೇತ್ರದ ಮೇಲೆ ಮಾಡುತ್ತಿರುವ  ಅಪಪ್ರಚಾರದ ವಿರುದ್ಧ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಮಸ್ತ ಸಹಕಾರಿ ಬಂಧುಗಳಿಂದ ಸಹಕಾರ ರತ್ನ ಡಾ. ಎಂ.ಎನ್. ರಾಜೇಂದ್ರ ಕುಮಾ‌ರ್ ನೇತೃತ್ವದಲ್ಲಿ ನಡೆದ ಧರ್ಮಜಾಗೃತಿ ಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ.ಧರ್ಮಸ್ಥಳ ಕ್ಷೇತ್ರದ ವಿರುದ್ಧ ಅಪಪ್ರಚಾರ ನಡೆಸಿ ಆ ಕ್ಷೇತ್ರದ ಪಾವಿತ್ರ್ಯತೆ ಧಕ್ಕೆ ತರಲು ಯತ್ನಿಸುವ ಶಕ್ತಿಗಳ ವಿರುದ್ಧ ಸಹಕಾರಿಗಳು  ಆಕ್ರೋಶ ವ್ಯಕ್ತ ಪಡಿಸಿದರು. ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ, ಶೈಕ್ಷಣಿಕ ಕ್ಷೇತ್ರಕ್ಕೆ ರಾಜ್ಯದಲ್ಲೇ ಮಾದರಿಯಾಗಿ ಕೊಡುಗೆ ನೀಡುತ್ತಿರುವ ಶ್ರೀ ಧರ್ಮಸ್ಥಳ ಕ್ಷೇತ್ರದ ಹಾಗೂ ಧರ್ಮಾಧಿ ಕಾರಿ ಡಾ.ಡಿ. ವೀರೇಂದ್ರ ಹೆಗ್ಗಡೆ ಪರವಾಗಿ ನಾವಿದ್ದೇವೆ, ಸಹಬಾಳ್ವೆಯ ಪ್ರತೀಕವಾಗಿರುವ ಶತಮಾನಗಳ ಪರಂಪರೆಯ ಪವಿತ್ರ ಕ್ಷೇತ್ರದ ಪಾವಿತ್ರತೆಯ ಷಡ್ಯಂತ್ರವನ್ನು ಜಾತಿ, ಧರ್ಮ, ಬೇಧ ಬಿಟ್ಟು ಸಂಘಟಿತರಾಗಿ ಖಂಡಿಸುತ್ತೇವೆ ಎಂಬ ಅಭಿಪ್ರಾಯ ವ್ಯಕ್ತವಾಯಿತು.

ಧರ್ಮ ಜಾಗೃತಿ ಯಾತ್ರೆಯ ವಿಡಿಯೋಗಾಗಿ ಕ್ಲಿಕ್ ಮಾಡಿ

ಧರ್ಮ ಜಾಗೃತಿ ವಾಹನ ಜಾಥಾಕ್ಕೆ ಉಜಿರೆಯಲ್ಲಿ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ ಡಾ. ಎಂ.ಎನ್. ರಾಜೇಂದ್ರ ಕುಮಾ‌ರ್ ಚಾಲನೆ ನೀಡಿ, ಜಾತ್ಯತೀತ, ಪಕ್ಷಾತೀತ ವಾಗಿ ನಡೆಯುತ್ತಿರುವ ಈ ಕಾರ್ಯಕ್ರಮಕ್ಕೆ ಎಲ್ಲ ಸಹಕಾರಿ ಗಳು ಕೈಜೋಡಿಸಿದ್ದು, ಅವರಿಗೆ ಧನ್ಯವಾದಗಳು. ನಮ್ಮದು ಯಾರ ವಿರುದ್ಧವೂ ನಡೆಯುವ ಕಾರ್ಯಕ್ರಮವಲ್ಲ. ಧರ್ಮಕ್ಷೇತ್ರಕ್ಕೆ ಕಳಂಕ ತರುತ್ತಿರುವ ಷಡ್ಯಂತ್ರವನ್ನು ವಿರೋಧಿಸುವುದು ಪ್ರಮುಖ ಉದ್ದೇಶ ಎಂದರು. ಉಭಯ ಜಿಲ್ಲೆಗಳ 1,500ಕ್ಕೂ ಅಧಿಕ ಸಹಕಾರಿ ಸಂಘಗಳಿಂದ 3,000ಕ್ಕೂ ಅಧಿಕ ವಾಹನಗಳಲ್ಲಿ ಸುಮಾರು 10 ಸಾವಿರಕ್ಕಿಂತ ಅಧಿಕ ಸಹಕಾರಿ ಬಂಧುಗಳು ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ.

ಉಜಿರೆಯಿಂದ ಧರ್ಮಸ್ಥಳಕ್ಕೆ ತೆರಳುವ ರಸ್ತೆಯಲ್ಲಿ ಕಿಲೋಮೀಟರ್‌ಗಟ್ಟಲೆ ವಾಹನಗಳು ಸಹಕಾರಿ ಧ್ವಜದೊಂದಿಗೆ ಸರತಿ ಸಾಲಿನಲ್ಲಿ ತೆರಳಿ, ಅಲ್ಲಿನ ಅಮೃತವರ್ಷಿಣಿ ಸಭಾಭವನದಲ್ಲಿ ಧರ್ಮ ಜಾಗೃತಿ ಸಭಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ಡಾ. ರಾಜೇಂದ್ರ ಕುಮಾರ್ ಧರ್ಮಸ್ಥಳ ಕ್ಷೇತ್ರಕ್ಕೆ ಅಪಪ್ರಚಾರವಾದಾಗ ಇಡೀ ನಾಡು ಜಾತಿ-ಧರ್ಮ ಭೇದ ಬಿಟ್ಟು ಒಂದಾಗಿದೆ. ಧಾರ್ಮಿಕ ಕ್ಷೇತ್ರಕ್ಕೆ ಆಗುತ್ತಿರುವ ಅನ್ಯಾಯವನ್ನು ನಾವು ಒಂದಾಗಿ ಖಂಡಿಸಲೇಬೇಕಾಗಿದೆ. ಧರ್ಮ ಸ್ಥಳದ ಬಗ್ಗೆ ಆಗುತ್ತಿರುವ ಅಪಪ್ರಚಾರ ಹಾಗೂ ಸುಳ್ಳು ವದಂತಿ ಖಂಡಿಸಿ ಸರ್ವ ಸಹಕಾರಿಗಳು ಧರ್ಮಾಧಿ ಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಬೆಂಬಲಕ್ಕೆ ನಿಂತಿದ್ದೇವೆ. ಆ ಕಾರಣದಿಂದಲೇ ಧರ್ಮಜಾಗೃತಿ ಯಾತ್ರೆ ಕೈಗೊಳ್ಳಲಾಗಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷ, ಸಹಕಾರಿ ರತ್ನ ಡಾ. ಎಂ.ಎನ್‌.ರಾಜೇಂದ್ರ ಕುಮಾರ್ ಹೇಳಿದರು. ನಾವೆಲ್ಲರೂ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಜತೆಗಿದ್ದು, ಯಾರಿಗೂ ಅನ್ಯಾಯವಾಗದ ರೀತಿಯಲ್ಲಿ ಧರ್ಮಸ್ಥಳ ಕ್ಷೇತ್ರದ ರಕ್ಷಣೆಗೆ ಬದ್ಧರಾಗಿದ್ದೇವೆ. ಇದರಿಂದ ಮನಸ್ಸಿಗೂ ಶಾಂತಿ, ನೆಮ್ಮದಿ ದೊರಕುತ್ತದೆ ಎಂದರು. 

"ಧರ್ಮಸ್ಥಳ ಕ್ಷೇತ್ರದ ಅಪಪ್ರಚಾರ ವಿರುದ್ಧ ಸಹಕಾರ ರಂಗದ ಶಕ್ತಿ ಪ್ರದರ್ಶನ ನಮಲ್ಲಿ ಮತ್ತಷ್ಟು ಬಲ, ಆತ್ಮಸ್ಥೆರ್ಯ ಹೆಚ್ಚಿಸಿದೆ. ನಿಮ್ಮೆಲ್ಲರ ಪ್ರೀತಿ, ಅಭಿಮಾನಕ್ಕೆ ನಾವು ಆಭಾರಿಯಾಗಿದ್ದೇವೆ,'' ಎಂದು ಧರ್ಮಾಧಿಕಾರಿ, ರಾಜ್ಯಸಭೆ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು. ಸದಸ್ಯಮೂಡುಬಿದಿರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ `ಅಧ್ಯಕ್ಷ ಡಾ.ಎಂ.ಮೋಹನ ಆಳ್ವ ಮಾತನಾಡಿ, "ಧರ್ಮಸ್ಥಳ ಕ್ಷೇತ್ರದಿಂದ ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ ಸಾಂಸ್ಕೃತಿಕ ಕ್ಷೇತ್ರಕ್ಕಾದ ಕೊಡುಗೆಯನ್ನು ನಾವು ಎಂದೂ ಮರೆಯುವಂತಿಲ್ಲ. ಈ ಕಾರಣದಿಂದ ಸತ್ಯ, ಧರ್ಮ, ನ್ಯಾಯ, ನೀತಿ ಸದಾ ನೆಲೆ ನಿಂತಿರುವ ಧರ್ಮಸ್ಥಳದ ರಕ್ಷಣೆಗೆ ಎಲ್ಲರೂ ಕಟಿಬದ್ದರಾಗಿ ನಿಲ್ಲಬೇಕಿದೆ. 'ಸತ್ಯಮೇವ ಜಯತೇ' ಎಂಬಂತೆ ಸತ್ಯಕ್ಕೆ ಖಂಡಿತಾ ಜಯ ಸಿಗಲಿದೆ. ಸತ್ಯದ ಜತೆಗೆ ನಾವಿದ್ದೇವೆ. ಹೆಗ್ಗಡೆಯವರ ನೇತೃತ್ವದಲ್ಲಿ ಹಲವು ಸಮಾಜಮುಖಿ ಸೇವಾಕಾರ್ಯಗಳ ಮೂಲಕ ಧರ್ಮಸ್ಥಳ ಇಂದು ಇಡೀ ದೇಶಕ್ಕೆ ಮಾದರಿ ಸಂಸ್ಥೆಯಾಗಿದೆ,' ಎಂದು ಕ್ಷೇತ್ರದ ಕಾರ್ಯ ಶ್ಲಾಘಿಸಿದರು.

ಬಳಿಕ ಸಹಕಾರಿ ಬಂಧುಗಳು ಶ್ರೀ ಮಂಜುನಾಥ ಸ್ವಾಮಿಯ ದರ್ಶನ ಪಡೆದು ಅನ್ನಪೂರ್ಣದಲ್ಲಿ ಭೋಜನ ಪೂರೈಸಿದರು. ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕರ ಸಹಿತ ನಾನಾ ಸಹಕಾರಿ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಭಾಗವಹಿಸಿದ್ದರು.

ಶ್ರೀಧಾಮ ಮಾಣಿಲ ಶ್ರೀ ಮೋಹನದಾಸ ಸ್ವಾಮೀಜಿ, ದಕ್ಷಿಣ ಕನ್ನಡ ಹಾಲು ಉತ್ಪಾದಕರ ಸಹಕಾರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಕ್ಯಾಂಪ್ರೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಲಿ, ಎಸ್‌ಸಿಡಿಸಿಸಿ ಬ್ಯಾಂಕ್‌ನ ನಿರ್ದೇಶಕ ರಾದ ಟಿ.ಜಿ. ರಾಜಾರಾಮ್ ಭಟ್ ಭಾಸ್ಕರ್ ಎಸ್. ಕೋಟ್ಯಾನ್, ಐಕಳಬಾವ ದೇವಿಪ್ರಸಾದ್ ಶೆಟ್ಟಿ ಬೆಳಪು, ಶಶಿಕುಮಾರ್‌ ರೈ ಬಾಲ್ಯೊಟ್ಟು., ಎಸ್.ಬಿ. ಜಯರಾಮ ರೈ, ಎಂ. ಮಹೇಶ್ ಹೆಗ್ಡೆ ಅಶೋಕ್ ಕುಮಾರ್ ಶೆಟ್ಟಿ ಜೈರಾಜ್ ಬಿ. ರೈ, ಕುಶಲಪ್ಪ ಗೌಡ, ಎಸ್.ಎನ್. ಮನ್ಮಥ, ರಾಜೇಶ್ ರಾವ್, ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗೋಪಾಲಕೃಷ್ಣಭಟ್ ಮತ್ತು ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯ ಸುಮಾರು 10 ಸಾವಿರಕ್ಕೂ ಅಧಿಕ ಮಂದಿ ಧರ್ಮಜಾಗೃತಿ ಯಾತ್ರೆಯಲ್ಲಿ ಆಗಮಿಸಿದ್ದರು.

ದ.ಕ. ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಶಶಿಕುಮಾರ್ ರೈ ಸ್ವಾಗತಿಸಿದರು. ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್‌ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ವಂದಿಸಿದರು. ಶ್ರೀನಿವಾಸ ರಾವ್ ಕಾರ್ಯಕ್ರಮ ನಿರೂಪಿಸಿದರು.

Category
ಕರಾವಳಿ ತರಂಗಿಣಿ