ಮಂಗಳೂರು : ನಾಲ್ಕನೇ ವರ್ಷದ "ಪಿಲಿ ಅಜನೆ" ಎಂಬ ಹುಲಿ ಕುಣಿತ ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯನ್ನು ಕುದ್ರೋಳಿ ಶ್ರೀ ಭಗವತಿ ದೇವಾಲಯದಲ್ಲಿ ಬಿಡುಗಡೆಗೊಳಿಸಲಾಯಿತು. ಮಂಗಳೂರು ನಗರದ ದೀಪಾ ಕಂಫರ್ಟ್ಸ್ ಬಳಿ ಶ್ರೀ ಪ್ರಮೋದ್ ಕರ್ಕೇರ ಮತ್ತು ಪಿಲಿ ಅಜನೆ ತಂಡದವರ ನೇತೃತ್ವದಲ್ಲಿ ನಡೆಯುತ್ತಿರುವ "ಪಿಲಿ ಅಜನೆ" ಎಂಬ ವಿನೂತನ ಕಾರ್ಯಕ್ರಮವು ನಾಲ್ಕನೆ ಆವೃತ್ತಿಗೆ ದಾಪುಗಾಲಿಟ್ಟಿದ್ದು, ಕಳೆದ ಮೂರು ವರ್ಷಗಳಿಂದ ಮಂಗಳೂರಿನ ಹಲವು ಹೆಸರಾಂತ ಹುಲಿ ಕುಣಿತ ತಂಡಗಳ ಭರ್ಜರಿ ಪ್ರದರ್ಶನ ನೀಡುವ ಮೂಲಕ ಜನರ ಮನ ಗೆದ್ದಿರುವ "ಪಿಲಿ ಅಜನೆ" ಈ ಬಾರಿಯೂ ಕೂಡಾ ಹೆಸರಾಂತ ಹುಲಿ ಕುಣಿತ ತಂಡದ ಮೂಲಕ ಅತ್ಯದ್ಭುತ ಪ್ರದರ್ಶನ ನೀಡಲಿದೆ. ಅಕ್ಟೋಬರ್ 2 ಗುರುವಾರದಂದು ಪಿಲಿ ಅಜನೆ ಕಾರ್ಯಕ್ರಮ ನೆರವೇರಲಿದೆ, ಹುಲಿ ಕುಣಿತ ಕಾರ್ಯಕ್ರಮಕ್ಕೂ ಮುನ್ನ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಪಿಲಿ ಅಜನೆ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಗೂ ಮುನ್ನ ಕುದ್ರೋಳಿ ಶ್ರೀ ಭಗವತಿ ದೇಗುಲದಲ್ಲಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು. ಆಮಂತ್ರಣ ಪತ್ರಿಕೆ ಬಿಡುಗಡೆ ಸಂದರ್ಭದಲ್ಲಿ ಕಾರ್ಯಕ್ರಮದ ನೇತೃತ್ವ ವಹಿಸಿರುವ ಶ್ರೀ ಪ್ರಮೋದ್ ಕರ್ಕೇರ ಹಾಗೂ ತಂಡದ ಸದಸ್ಯರು ಉಪಸ್ಥಿತರಿದ್ದರು.