ಧರ್ಮಸ್ಥಳ : ಧರ್ಮಸ್ಥಳದ ಬಂಗ್ಲೆಗುಡ್ಡ ಅಸ್ಥಿಪಂಜರ ಪತ್ತೆ ಪ್ರಕರಣದ ತನಿಖೆ ಹೊಸ ತಿರುವು ಪಡೆದಿದೆ. ರಾಜ್ಯ ಸರ್ಕಾರ ನಿಯೋಜನೆ ಮಾಡಿರುವ ವಿಶೇಷ ತನಿಖಾ ತಂಡ (ಎಸ್‌ಐಟಿ) ಇಂದು ಸ್ಥಳಕ್ಕೆ ಭೇಟಿ ನೀಡುವುದನ್ನು ರದ್ದುಪಡಿಸಿದ್ದು, ಅದರ ಬದಲಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ಬಂಗ್ಲೆಗುಡ್ಡದಲ್ಲಿನ ಅರಣ್ಯ ಪ್ರದೇಶದ ಬಗ್ಗೆ ಅಗತ್ಯ ದಾಖಲೆಗಳನ್ನು ಒದಗಿಸಲು ಒಪ್ಪಿಕೊಂಡಿದ್ದಾರೆ. ಡಿಜಿಪಿ ಪ್ರಣಬ್ ಮೊಹಾಂತಿ ಅವರು ಬೆಂಗಳೂರಿಗೆ ತೆರಳುವ ಮುನ್ನ ಈ ನಿರ್ಧಾರ ಕೈಗೊಂಡಿದ್ದಾರೆ. ಆರಂಭದಲ್ಲಿ, ಎಸ್‌ಐಟಿ ತಂಡವು ಅಸ್ಥಿಪಂಜರಗಳನ್ನು ಹುಡುಕಲು ಬಂಗ್ಲೆಗುಡ್ಡದಲ್ಲಿ ಶೋಧ ಕಾರ್ಯ ಮತ್ತು ಉತ್ಖನನ ನಡೆಸಲು ಯೋಜಿಸಿತ್ತು. ಇದಕ್ಕಾಗಿ ಅರಣ್ಯ ಇಲಾಖೆಯ ಸಹಕಾರ ಕೇಳಲಾಗಿತ್ತು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದ ಬಳಿಕ ದಾಖಲೆ ನೀಡಲು ಮುಂದಾಗಿದ್ದರು. ಆದರೆ, ಈಗ ಸ್ಥಳ ಭೇಟಿಯ ಬದಲು ನೇರವಾಗಿ ಉಪಗ್ರಹ ಚಿತ್ರಗಳು (ಸ್ಯಾಟಲೈಟ್ ಇಮೇಜ್) ಮತ್ತು ಇತರ ಅಗತ್ಯ ದಾಖಲೆಗಳನ್ನು ಒದಗಿಸುವ ಮೂಲಕ ಅರಣ್ಯದ ವಿಸ್ತೀರ್ಣ ಮತ್ತು ಮರಗಳ ಮಾಹಿತಿಯನ್ನು ನೀಡಲು ಅರಣ್ಯ ಇಲಾಖೆ ಒಪ್ಪಿಕೊಂಡಿದೆ.
ಈ ದಾಖಲೆಗಳ ಆಧಾರದ ಮೇಲೆ ಎಸ್‌ಐಟಿ ತನಿಖೆಗೆ ಹೊಸ ರೂಪುರೇಷೆ ಹಾಕಿಕೊಳ್ಳಲಿದೆ. ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂಳಲಾಗಿದೆ ಎಂದು ಚಿನ್ನಯ್ಯ ಒಂದು ಬುರುಡೆಯನ್ನು ಪೊಲೀಸರಿಗೆ ತಂದುಕೊಟ್ಟು ದೂರು ನೀಡಿದ್ದ ಪ್ರಕರಣದ ಆರೋಪಿಗಳಲ್ಲಿ ಒಬ್ಬನಾದ ವಿಠಲ ಗೌಡ, ತಾನು ಈ ಹಿಂದೆ ಬಂಗ್ಲೆಗುಡ್ಡದ ಕಾಡಿನಿಂದಲೇ ತಲೆಬುರುಡೆಯನ್ನು ತಂದಿದ್ದೆ ಎಂದು ಹೇಳಿಕೆ ನೀಡಿದ್ದನು. ಜೊತೆಗೆ, ಮಹಜರು ಸಂದರ್ಭದಲ್ಲಿ ಅಸ್ಥಿಪಂಜರಗಳನ್ನು ತೋರಿಸಿದ್ದಾಗಿಯೂ ಹೇಳಿಕೊಂಡಿದ್ದ. ಈ ಹಿನ್ನೆಲೆಯಲ್ಲಿ ಬಂಗ್ಲೆಗುಡ್ಡದಲ್ಲಿ ಅಸ್ಥಿಪಂಜರಗಳಿದ್ದರೆ ಅವುಗಳನ್ನು ಸಂಗ್ರಹಿಸಲು ಎಸ್‌ಐಟಿ ನಿರ್ಧರಿಸಿತ್ತು. ಈಗ ತನಿಖೆಯ ಆಳವಾದ ಅಧ್ಯಯನ ಹಾಗೂ ಹೆಚ್ಚಿನ ಮಾಹಿತಿ ಸಂಗ್ರಹದ ನಂತರವಷ್ಟೇ ಬಂಗ್ಲೆಗುಡ್ಡಕ್ಕೆ ಭೇಟಿ ನೀಡಲು ಎಸ್‌ಐಟಿ ಯೋಜಿಸಿದೆ. ಸದ್ಯಕ್ಕೆ, ಉತ್ಖನನದ ಬದಲು ಭೂಮಿಯ ಮೇಲ್ಭಾಗದಲ್ಲಿ ಸಿಗಬಹುದಾದ ಅಸ್ಥಿಪಂಜರಗಳನ್ನು ಸಂಗ್ರಹಿಸಲು ತಂಡ ನಿರ್ಧರಿಸಿದೆ. ಈ ತನಿಖೆಯ ಮುಂದಿನ ಹಂತವು ಅರಣ್ಯ ಇಲಾಖೆ ಒದಗಿಸುವ ದಾಖಲೆಗಳನ್ನು ಅವಲಂಬಿಸಿದೆ.