image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ವೆನ್ಲಾಕ್ ನಲ್ಲಿ ಸುಸಜ್ಜಿತ ಕ್ಯಾಥ್ ಲ್ಯಾಬ್ ಗೆ ದಿನೇಶ್ ಗುಂಡೂರಾವ್ ಚಾಲನೆ

ವೆನ್ಲಾಕ್ ನಲ್ಲಿ ಸುಸಜ್ಜಿತ ಕ್ಯಾಥ್ ಲ್ಯಾಬ್ ಗೆ ದಿನೇಶ್ ಗುಂಡೂರಾವ್ ಚಾಲನೆ

ಮಂಗಳೂರು : ದ.ಕ. ಜಿಲ್ಲಾಸ್ಪತ್ರೆ ವೆನ್ಲಾಕ್ ನಲ್ಲಿ ಹೃದಯ ಸಂಬಂಧಿ ರೋಗಗಳಿಗೆ ಚಿಕಿತ್ಸೆಗೆ ಪೂರಕವಾದ ಕ್ಯಾಥ್ (ಕಾರ್ಡಿಯಾಕ್ ಕ್ಯಾತಿಟರೈಸೇಶನ್) ಲ್ಯಾಬ್ ಗೆ ರವಿವಾರ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಚಾಲನೆ ನೀಡಿದರು. ವೆನ್ಲಾಕ್ ನ ಹೊಸ ತುರ್ತು ಚಿಕಿತ್ಸ್ಸಾ ವಿಭಾಗದ ಘಟಕದ ನೆಲ ಮಹಡಿಯಲ್ಲಿ ನೂತನ ಕ್ಯಾಥ್ ಲ್ಯಾಬ್ ರಚನೆಯಾಗಿದ್ದು, ಇದೇ ವೇಳೆ ಅವರು ಕಟ್ಟಡದ ನಾಲ್ಕನೇ ಮಹಡಿಯಲ್ಲಿ 24 ಬೆಡ್ಗಳ ಡಯಾಲಿಸಿಸ್ ವಿಭಾಗವನ್ನು ಉದ್ಘಾಟಿಸಿದರು. ಕ್ಯಾಥ್ ಲ್ಯಾಬ್ ಮೂಲಕ ಆಂಜಿಯೋಪ್ಲಾಸ್ಟಿ ಹಾಗೂ ಆಯಂಜಿಯೋಗ್ರಾಮ್ ಮೊದಲಾದ ದುಬಾರಿ ವೆಚ್ಚದ ಹೃದಯ ಶಸ್ತ್ರಚಿಕಿತ್ಸೆಗಳು ಬಡ ರೋಗಿಗಳಿಗೆ ಮಿತದರದಲ್ಲಿ ಲಭಿಸಲಿದೆ. ಕ್ಯಾಥ್ ಲ್ಯಾಬ್ ಗೆ ಕೆಎಂಸಿ ಆಸ್ಪತ್ರೆಯಿಂದ ತಜ್ಞ ವೈದ್ಯರು ಸೇರಿದಂತೆ ವೈದ್ಯಕೀಯ ಸಿಬ್ಬಂದಿ ನೇಮಕ ಈಗಾಗಲೇ ನಡೆದಿದೆ.

ಈ ಎರಡು ವಿಭಾಗಗಳ ಉದ್ಘಾಟನೆ ನೆರವೇರಿಸಿ ಸುದ್ದಿಗಾರರ ಜತೆ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್, ರಾಜ್ಯದಲ್ಲೇ ವಿನೂತನವಾಗಿ ವೆನ್ಲಾಕ್ ಸರಕಾರಿ ಆಸ್ಪತ್ರೆಯಲ್ಲಿ ಆಯಂಜಿಯೋಪ್ಲಾಸ್ಟಿ ಮತ್ತು ಆಯಂಜಿಯೋಗ್ರಾಮ್ ನಂತಹ ಹೃದಯ ಸಂಬಂಧಿ ಶಸ್ತ್ರ ಚಿಕಿತ್ಸೆಗಳಿಗೆ ಈ ಕ್ಯಾಥ್ ಲ್ಯಾಬ್ ನಿರ್ಮಾಣವಾಗಿದೆ. ಕೆಎಂಸಿಯವರ ಸಹಕಾರದಲ್ಲಿ ಐದು ಕೋಟಿ ರೂ. ವೆಚ್ಚದಲ್ಲಿ ಇದು ನಿರ್ಮಾಣವಾಗಿದ್ದರೆ, ಅಗತ್ಯ ಔಷಧಿ, ಯಂತ್ರೋಪಕರಣಗಳು ಇತರ ಖರ್ಚುವೆಚ್ಚಗಳನ್ನು ಸರಕಾರ ಭರಿಸಲಿದೆ. ಬಿಪಿಎಲ್ ಕಾರ್ಡ್ ಹೊಂದಿರುವ ರೋಗಿಗಳಿಗೆ ಇಲ್ಲಿ ಉಚಿತವಾಗಿ ಚಿಕಿತ್ಸೆ ದೊರೆಯಲಿದೆ ಎಂದರು. ಆಧುನಿಕ ವ್ಯವಸ್ಥೆ ಸಾರ್ವಜನಿಕರಿಗೆ ವೆನ್ಲಾಕ್ ನ ಕ್ಯಾಥ್ ಲ್ಯಾಬ್ ಮೂಲಕ ದೊರೆಯಲಿದೆ. ಆಂಜಿಯೋಗ್ರಾಮ್ ಗೆ ಸದ್ಯ ಬಿಪಿಎಲ್ಗೂ ದರವಿದ್ದು, ಅದರಲ್ಲೂ ವಿನಾಯಿತಿ ನೀಡುವ ನಿಟ್ಟಿನಲ್ಲಿ ಕೋಡ್ ಅಳವಡಿಸುವ ಕಾರ್ಯ ರಾಜ್ಯ ಮಟ್ಟದಲ್ಲಿ ತೀರ್ಮಾನವಾಗಲಿದೆ ಎಂದು ಅವರು ಹೇಳಿದರು.

ಹಳೆಯ ಕಟ್ಟಡದಲ್ಲಿದ್ದ ಡಯಾಲಿಸಿಸ್ ಕೇಂದ್ರವನ್ನು ನೂತನ ವೆನ್ಲಾಕ್ ನ ಹೊಸ ತುರ್ತು ಚಿಕಿತ್ಸಾ ವಿಭಾಗದ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಎಂಆರ್ಪಿಎಲ್, ಕೆಐಒಸಿಎಲ್ ಸೇರಿದಂತೆ ಹಲವು ಖಾಸಗಿ ಸಂಸ್ಥೆಗಳವರು ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿದ್ದಾರೆ. ಜನರಿಗೆ ಉಚಿತವಾಗಿ ಚಿಕಿತ್ಸೆ ನೀಡುವ ಸಲುವಾಗಿ ಇಲ್ಲಿ 24 ಹಾಸಿಗೆಗಳಿಗೆ ಡಯಾಲಿಸಿಸ್ ಯಂತ್ರಗಳನ್ನು ಅಳವಡಿಸಲಾಗಿದೆ. ಡಯಾಲಿಸಸ್ ಅಗತ್ಯವಿರುವ ರೋಗಿಗಳು ವಾರಕ್ಕೆ ಎರಡು ಬಾರಿ ಆಸ್ಪತ್ರೆಗೆ ಭೇಟಿ ನೀಡುವ ಅಗತ್ಯವಿದ್ದು, ದಿನಕ್ಕೆ ನಾಲ್ಕು ರೋಗಿಗಳಿಗೆ ಒಂದು ಬೆಡ್ ನಲ್ಲಿ ಡಯಾಲಿಸಿಸ್ ಮಾಡಬಹುದು. ಜಿಲ್ಲೆಯ ಹೊಸ ತಾಲೂಕುಗಳು ಸೇರಿದಂತೆ ಒಂಭತ್ತು ಕಡೆ ಆರೋಗ್ಯ ಕೇಂದ್ರಗಳಲ್ಲಿ ಡಯಾಲಿಸಿಸ್ ಯಂತ್ರಗಳ ಮೂಲಕ ಡಯಾಲಿಸಿಸ್ ನಡೆಸಲಾಗುತ್ತಿದ್ದು, ಒಟ್ಟು ದ.ಕ. ಜಿಲ್ಲೆಯಲ್ಲಿ 94 ಡಯಾಲಿಸಿಸ್ ಯಂತ್ರಗಳು ಕಾರ್ಯಾಚರಿಸುತ್ತಿವೆ. ಹೆಚ್ಚುವರಿ ಯಂತ್ರಗಳ ಬೇಡಿಕೆ ಇದ್ದಾಗ ಪ್ರಾಯೋಜಕರ ನೆರವು ಪಡೆಯಲಾಗುತ್ತದೆ ಎಂದು ಸಚಿವರು ಸುದ್ದಿಗಾರರ ಪ್ರಶ್ನೆಗೆ ಪ್ರತಿಕ್ರಿಯಿಸಿದರು. ಈ ಸಂದರ್ಭ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಮುಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಜಿಲ್ಲಾ ಆರೋಗ್ಯಾಧಿಕಾರಿ ಡಾ.ತಿಮ್ಮಯ್ಯ, ವೆನ್ಲಾಕ್ ಆಸ್ಪತ್ರೆಯ ಅಧೀಕ್ಷಕ ಡಾ.ಶಿವಪ್ರಕಾಶ, ಕೆಎಂಸಿ ಆಸ್ಪತ್ರೆಯ ಡೀನ್ ಡಾ.ಉನ್ನಿಕೃಷ್ಣನ್ ಹಾಗೂ ಇನ್ನಿತರರು ಉಪಸ್ಥಿತರಿದ್ದರು.

Category
ಕರಾವಳಿ ತರಂಗಿಣಿ