ಉಡುಪಿ: ಯಶವಂತಪುರ ಹಾಗೂ ಕಾರವಾರ ನಡುವೆ ವಾರದಲ್ಲಿ ಮೂರು ದಿನ ಹಗಲಿನಲ್ಲಿ ಸಂಚರಿಸುತಿದ್ದ ಎಕ್ಸ್‌ಪ್ರೆಸ್ ರೈಲಿನ ರದ್ದತಿ ಅವಧಿಯನ್ನು ಇನ್ನೂ 44 ದಿನಗಳ ಕಾಲ ವಿಸ್ತರಿಸಲು ದಕ್ಷಿಣ-ಪಶ್ಚಿಮ ರೈಲ್ವೆ (ನೈರುತ್ಯ ರೈಲ್ವೆ) ನಿರ್ಧರಿಸಿದೆ ಎಂದು ಕೊಂಕಣ ರೈಲ್ವೆ ಪ್ರಕಟಣೆಯಲ್ಲಿ ತಿಳಿಸಿದೆ.ರೈಲು ನಂ.16515 ಯಶವಂತಪುರ-ಕಾರವಾರ ನಡುವೆ ಸೋಮವಾರ, ಬುಧವಾರ, ಶುಕ್ರವಾರ ಸಂಚರಿಸುತಿದ್ದ ರೈಲಿನ ಸಂಚಾರದ ರದ್ದತಿಯ ಅವಧಿಯನ್ನು ನವೆಂಬರ್ 3ರಿಂದ ಡಿ.15ರವರೆಗೆ ವಿಸ್ತರಿಸಲಾಗಿದೆ.
ಅದೇ ರೀತಿ ರೈಲು ನಂ.16516 ಕಾರವಾರ-ಯಶವಂತಪುರ ನಡುವೆ ಪ್ರತಿ ಮಂಗಳವಾರ, ಗುರುವಾರ, ಶನಿವಾರ ಸಂಚರಿಸುತಿದ್ದ ರೈಲಿನ ಸಂಚಾರದ ರದ್ಧತಿಯ ಅವಧಿಯನ್ನು ನ.4ರಿಂದ ಡಿಸೆಂಬರ್ 16ರವರೆಗೆ ವಿಸ್ತರಿಸಲಾಗಿದೆ. ಇದರಿಂದ ಎರಡೂ ರೈಲು ತಲಾ 19 ಟ್ರಿಪ್‌ಗಳು ರದ್ದಾಗಿವೆ.ಕಳೆದ ಮಳೆಗಾಲದ ಪ್ರಾರಂಭದಲ್ಲಿ ಸುರಿದ ಭಾರೀ ಮಳೆಯಿಂದಾಗಿ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಜೂನ್ ಹಾಗೂ ಆಗಸ್ಟ್ ತಿಂಗಳಲ್ಲಿ ಉಂಟಾದ ಭೂಕುಸಿತ, ಗುಡ್ಡ ಕುಸಿತದಿಂದ ಕಳೆದ ಜೂ.2 ಮತ್ತು 3ರಿಂದ ಈ ರೈಲುಗಳ ಸಂಚಾರವನ್ನು ರದ್ದುಪಡಿಸಲಾಗಿತ್ತು. ಮೊದಲ ಬಾರಿ ಜೂ.2ರಿಂದ ನ.1ರವರೆಗೆ ಹಗಲು ಸಂಚರಿಸುತಿದ್ದ ಈ ರೈಲಿನ ಸಂಚಾರ ರದ್ದು ಮಾಡಲಾಗಿತ್ತು.
ಮಂಗಳೂರು- ಹಾಸನ ರೈಲು ಮಾರ್ಗದ ಸುಬ್ರಹ್ಮಣ್ಯ ರೋಡ್ ಹಾಗೂ ಸಕಲೇಶಪುರ ನಡುವೆ ರೈಲ್ವೆ ಮಾರ್ಗದ ವಿದ್ಯುದ್ದೀಕರಣ ಕಾಮಗಾರಿ ಈಗ ನಡೆಯುತಿದ್ದು ಅದನ್ನು ಪೂರ್ಣಗೊಳಿಸುವ ಉದ್ದೇಶದಿಂದ ರೈಲು ಸಂಚಾರದ ಅವಧಿಯನ್ನು 44 ದಿನಗಳ ಕಾಲ ವಿಸ್ತರಿಸಲಾಗಿದೆ ಎಂದು ನೈರುತ್ಯ ರೈಲ್ವೆಯ ಮೂಲಗಳು ತಿಳಿಸಿವೆ.