ಮಂಗಳೂರು : ಶಿರಾಡಿ ಘಾಟ್ ಮೂಲಕ ಹಾದುಹೋಗುವ ರಸ್ತೆ ಮತ್ತು ರೈಲು ಮಾರ್ಗಗಳ ಏಕೀಕೃತ ಕಾರ್ಯ ಸಾಧ್ಯತಾ ವರದಿ ಸಿದ್ಧಪಡಿಸುವ ಕೋರಿಕೆಯನ್ನು ಕೇಂದ್ರ ಸರಕಾರ ಅನುಮೋದಿಸಿರುವುದಾಗಿ ಸಂಸದ ಕ್ಯಾ. ಬ್ರಿಜೇಶ್ ಚೌಟ ತಿಳಿಸಿದ್ದಾರೆ. ಹೊಸದಿಲ್ಲಿಯಲ್ಲಿ ಶುಕ್ರವಾರ ರಸ್ತೆ ಸಾರಿಗೆ ಸಚಿವಾಲಯದ ಕಾರ್ಯದರ್ಶಿ ಉಮಾಶಂಕರ್ ಅವರನ್ನು ಭೇಟಿಯಾಗಿ ವಿವಿಧ ಯೋಜನೆಗಳ ಬಗ್ಗೆ ಚರ್ಚೆ ನಡೆಸಿದ ಅವರು, ಶಿರಾಡಿ ಘಾಟ್ ಮೂಲಕ ಹಾದು ಹೋಗಲಿರುವ ನೂತನ ಹೆದ್ದಾರಿ ಹಾಗೂ ರೈಲು ಮಾರ್ಗ ಅಭಿವೃದ್ಧಿ ಕಾರ್ಯವನ್ನು ರೈಲು ಸಚಿವಾಲಯದ ಸಹಯೋಗದಲ್ಲಿ ಏಕೀಕೃತವಾಗಿ ಕೈಗೊಂಡರೆ ಬೆಂಗ ಳೂರು- ಮಂಗಳೂರು ಹೈಸ್ಪೀಡ್ ಸಂಪರ್ಕಕ್ಕೆ ನೆರವಾಗಲಿದೆ ಎಂದರು.
ಮಂಗಳೂರು ಪೋರ್ಟ್ ಕನೆಕ್ಟಿವಿಟಿ ಯೋಜನೆಯನ್ನು ತುರ್ತಾಗಿ ರಾಷ್ಟ್ರೀಯ ಹೆದ್ದಾರಿ. ಪ್ರಾಧಿಕಾರಕ್ಕೆ ಹಸ್ತಾಂತರಿಸು ವಂತೆ ಯೂ ಒತ್ತಾಯಿಸಿದರು. ಮಾಣಿ- ಸಂಪಾಜೆ ಚತುಷ್ಪಥ ಯೋಜನೆಯನ್ನು ಸಚಿವಾಲಯದ ವಾರ್ಷಿಕ ಯೋಜನೆಗೆ ಸೇರಿಸುವಂತೆ ಕೋರಿರುವುದಾಗಿ ಅವರು ತಿಳಿಸಿದ್ದಾರೆ. ಇದೇ ವೇಳೆ ಚೌಟ ಅವರು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಕಾರ್ಯದರ್ಶಿ ಎಸ್.ಕೃಷ್ಣನ್ ಅವರನ್ನೂ ಭೇಟಿಯಾಗಿ, ಮಂಗಳೂರಿನ ಸಿಲಿಕಾನ್ ಬೀಚ್ ಯೋಜನೆ ಉದ್ಯಮದ ನೆರವಿನೊಂದಿಗೆ ಸುಧಾರಣೆ ಕಾಣುತ್ತಿರುವ ಬಗ್ಗೆ ಪ್ರಸ್ತಾಪಿಸಿದರಲ್ಲದೆ ಮಂಗಳೂರಿನ ಸರಕಾರಿ ಐಟಿಐನಲ್ಲಿ ಎಐ ಡಾಟಾ ಮತ್ತು ಸೈನ್ಸ್ ಲ್ಯಾಬ್ ಸ್ಥಾಪಿಸುವ ಕೇಂದ್ರ ಸರಕಾರದ ಘೋಷಣೆಯನ್ನು ಸ್ವಾಗತಿಸಿದ್ದಾರೆ.