image image
ಬ್ರೇಕಿಂಗ್ ನ್ಯೂಸ್
ಬ್ರೇಕಿಂಗ್ ನ್ಯೂಸ್

ಮಂಗಳೂರಿಗೆ ಪ್ರಯಾಣಿಕರ ಲಗೇಜ್ ದುಬೈಯಲ್ಲೇ ಬಿಟ್ಟು ಬಂದು ಎಡವಟ್ಟು ಮಾಡಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ !

ಮಂಗಳೂರಿಗೆ ಪ್ರಯಾಣಿಕರ ಲಗೇಜ್ ದುಬೈಯಲ್ಲೇ ಬಿಟ್ಟು ಬಂದು ಎಡವಟ್ಟು ಮಾಡಿದ ಏರ್ ಇಂಡಿಯಾ ಎಕ್ಸ್ ಪ್ರೆಸ್ !

ಮಂಗಳೂರು: ದುಬೈಯಿಂದ ಮಂಗಳೂರಿಗೆ ಆಗಮಿಸಿದ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನದಲ್ಲಿ ಹಲವು ಪ್ರಯಾಣಿಕರ ಲಗೇಜ್‌ಗಳನ್ನು ದುಬೈಯಲ್ಲೇ ಬಿಟ್ಟು ಬಂದಿರುವುದು ವರದಿಯಾಗಿದೆ. ವಿಮಾನ ಮಂಗಳೂರಿಗೆ ಬಂದು ಇಳಿದ ನಂತರ ಪ್ರಯಾಣಿಕರು ತಮ್ಮ ಲಗೇಜು ಪಡೆಯಲು ಬಂದಾಗಲೇ ಅವರಿಗೆ ನಿಮ್ಮ ಲಗೇಜು ದುಬೈಯಿಂದ ಲೋಡ್‌ ಆಗಿಲ್ಲ, ವಿಮಾನ ಫುಲ್‌ ಇದ್ದುದರಿಂದ ಕೆಲವು ಲಗೇಜ್‌ಗಳನ್ನು ಅಲ್ಲೇ ಬಿಡಲಾಗಿದೆ, ನಿಮಗೆ ನಾವು ನಾಳೆ ಬೆಳಗ್ಗೆ 5 ಗಂಟೆಗೆ ಬರುವ ವಿಮಾನದಲ್ಲಿ ಆ ಲಗೇಜ್‌ ದುಬೈಯಿಂದ ಬರಲಿದೆ ಅದನ್ನು ನಿಮಗೆ ತಲುಪಿಸುತ್ತೇವೆ ಎಂದು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನ ಸಿಬ್ಬಂದಿಗಳು ಮಾಹಿತಿ ನೀಡಿದ್ದಾರೆ. ಇದರಿಂದ ಹಲವಾರು ಪ್ರಯಾಣಿಕರು ತೀವ್ರ ತೊಂದರೆಗೆ ಒಳಗಾಗಿದ್ದಾರೆ. ಒಂದೇ ದಿನಕ್ಕಾಗಿ, ಕುಟುಂಬದ ಕಾರ್ಯಕ್ರಮಕ್ಕಾಗಿ ಬಂದಿದ್ದವರು ಮತ್ತು ಮರುದಿನಕ್ಕೆ ಹಾಳಾಗುವ ವಸ್ತುಗಳನ್ನು ಲಗೇಜ್‌ ನಲ್ಲಿ ಇಟ್ಟವರು ಹೀಗೆ ಹಲವಾರು ಪ್ರಯಾಣಿಕರು ಏರ್‌ ಇಂಡಿಯಾ ಸಿಬ್ಬಂದಿಯೊಂದಿಗೆ ವಾಗ್ವಾದಕ್ಕೆ ಇಳಿದರು. ನಮಗೆ ದುಬೈಯಲ್ಲಿ ಯಾವುದೇ ಮಾಹಿತಿ ನೀಡದೆ ನಮ್ಮ ಲಗೇಜ್‌ ಅನ್ನು ನಮ್ಮಿಂದ ಪಡೆದು ಅದನ್ನು ಅಲ್ಲೇ ಇಟ್ಟುಕೊಂಡಿದ್ದು ಯಾಕೆ ? ವಿಮಾನದಲ್ಲಿ ಸ್ಥಳಾವಕಾಶ ಇಲ್ಲದಿದ್ದರೆ ನಮಗೆ ಟಿಕೆಟ್‌ ನೀಡಿ ನಮ್ಮನ್ನು ವಿಮಾನಕ್ಕೆ ಹತ್ತಿಸಿಕೊಂಡಿದ್ದು ಯಾಕೆ ? ನಮ್ಮ ಲಗೇಜ್‌ ಅನ್ನು ಮಂಗಳೂರಿಗೆ ತಲುಪಿಸುತ್ತೇವೆ ಎಂದು ರಶೀದಿ ಕೊಟ್ಟು ಲಗೇಜ್‌ ಅನ್ನು ಅಲ್ಲೇ ಇಟ್ಟುಕೊಂಡಿದ್ದು ಯಾಕೆ ? ಮಂಗಳೂರಿಗೆ ಬಂದು ತಲುಪುವವರೆಗೆ ನಮಗೆ ಮಾಹಿತಿ ನೀಡಿಲ್ಲ ಯಾಕೆ ? ನೀವು ದುಬೈಯಲ್ಲೇ ಈ ಬಗ್ಗೆ ಹೇಳಿದ್ದರೆ ನಾವು ಈ ವಿಮಾನದಲ್ಲಿ ಬರುತ್ತಲೇ ಇರಲಿಲ್ಲ. ಈಗ ನಮಗೆ ಹಾಕಿಕೊಂಡು ಬಂದಿರುವ ಬಟ್ಟೆ ಬಿಟ್ಟರೆ ಬೇರೆ ಗತಿಯಿಲ್ಲದಂತಾಗಿದೆ, ನೀವು ಈ ರೀತಿ ಮಾಡಿರುವುದು ಪ್ರಯಾಣಿಕರಿಗೆ ವಂಚನೆಯಾಗಿದೆ. ನಮಗೆ ತೀವ್ರ ತೊಂದರೆಯಾಗಿದೆ ಎಂದು ಪ್ರಯಾಣಿಕರು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿಬ್ಬಂದಿಗಳೊಂದಿಗೆ ವಾಗ್ವಾದ ನಡೆಸಿದರು. ಅದಕ್ಕೆ ನಾಳೆ ಬೆಳಗ್ಗೆ 5 ಗಂಟೆಗೆ ಬರುವ ವಿಮಾನದಲ್ಲಿ ಲಗೇಜ್‌ ಬರುತ್ತದೆ, ನಿಮ್ಮ ವಿಳಾಸವನ್ನು ಕೊಟ್ಟು ಹೋಗಿ ನಾವೇ ನಿಮಗೆ ತಲುಪಿಸುತ್ತೇವೆ ಎಂದು ಸಿಬ್ಬಂದಿ ಉತ್ತರಿಸಿದ್ದಾರೆ. ಆದರೆ ಸಿಬ್ಬಂದಿಯ ಉತ್ತರದಿಂದ ಪ್ರಯಾಣಿಕರು ತೃಪ್ತರಾಗಿಲ್ಲ.

ನಾಳೆ ಬೆಳಗ್ಗೆ ನೀವು ಲಗೇಜ್‌ ತಲುಪಿಸುವುದು ಖಚಿತವೇ ? ಅದರಲ್ಲಿರುವ ಹಲವಾರು ವಸ್ತುಗಳು ಹಾಳಾಗಿ ಹೋಗುವಂತಹ ವಸ್ತುಗಳಿವೆ, ನಮ್ಮ ಬಟ್ಟೆಬರೆಗಳಿವೆ. ಒಂದೇ ದಿನಕ್ಕಾಗಿ ನಾನು ಭೇಟಿ ನೀಡಿದ್ದು, ನಾಳೆ ಅದು ಸಿಕ್ಕಿದರೆ ಏನು ಪ್ರಯೋಜನ ಎಂದು ಪ್ರಯಾಣಿಕರು ದೂರಿದ್ದಾರೆ. ಆದರೆ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ಸಿಬ್ಬಂದಿ ಮಾತ್ರ ಅಸಾಹಯಕರಾಗಿ ಉತ್ತರಿಸುತ್ತಿದ್ದರು. ಕೆಲವು ಪ್ರಯಾಣಿಕರು ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ನಲ್ಲಿ ಇಂತಹ ಸಮಸ್ಯೆಗಳು ಆಗಾಗ ಆಗ್ತಾಲೇ ಇದೆ. ನನಗೆ 3 - 4 ಬಾರಿ ಇದೇ ಸಮಸ್ಯೆಯಾಗಿದೆ ಎಂದು ದೂರಿದ್ದಾರೆ. ಇನ್ನು ಕೆಲವರು ನಮ್ಮ ಲಗೇಜ್‌ ನಲ್ಲಿರುವ ಹಾಳಾದ ವಸ್ತುಗಳಿಗೆ ನೀವೇ ಪರಿಹಾರ ಕೊಡಬೇಕು ಎಂದು ಒತ್ತಾಯಿಸಿದ್ದಾರೆ. ಈ ಏರ್‌ ಇಂಡಿಯಾ ಎಕ್ಸ್‌ಪ್ರೆಸ್‌ ವಿಮಾನ ದುಬೈಯಿಂದ ಮಧ್ಯಾಹ್ನ 12ಕ್ಕೆ ಹೊರಟು ಸಂಜೆ 5.30ಕ್ಕೆ ತಲುಪಬೇಕಿತ್ತು. ಆದರೆ ವಿಮಾನ ತಡವಾಗಿ 2.30ಗಂಟೆ ಸುಮಾರಿಗೆ ಹೊರಟು 7.20ರ ಸುಮಾರಿಗೆ ಮಂಗಳೂರು ತಲುಪಿದೆ. ಬಂದು ಇಳಿದ ನಂತರ ಈ ಹೊಸ ಸಮಸ್ಯೆ ಬೆಳಕಿಗೆ ಬಂದಿದೆ. ಹಲವಾರು ಪ್ರಯಾಣಿಕರು ಏರ್‌ಇಂಡಿಯಾ ಎಕ್ಸ್‌ಪ್ರೆಸ್‌ ಬಗ್ಗೆ ತೀವ್ರ ಅಸಮಾಧಾನ ಹಾಗು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Category
ಕರಾವಳಿ ತರಂಗಿಣಿ