ಮಂಗಳೂರು: ಜಿಲ್ಲೆಯ ಪ್ರಮುಖ ಕ್ರೀಡಾಂಗಣವಾದ ಮಣ್ಣಗುಡ್ಡೆಯ ಮಂಗಳಾ ಸ್ಟೇಡಿಯಂನ ಮೂಲ ಸೌಕರ್ಯಗಳ ಹೆಚ್ಚಳ ಸೇರಿದಂತೆ ಅಭಿವೃದ್ಧಿಪಡಿಸಲು ನಿರ್ಧರಿಸಲಾಗಿದೆ. ಈ ಕಾಮಗಾರಿಗಳಿಗಾಗಿ ಜನವರಿಯಿಂದ ಎರಡು ತಿಂಗಳವರೆಗೆ ಕ್ರೀಡಾಂಗಣ ಮುಚ್ಚಲಾಗುತ್ತಿದೆ. ಮಂಗಳಾ ಸ್ಟೇಡಿಯಂ ನಗರದ ಪ್ರತಿಷ್ಠಿತ ಅಂಗಣವಾಗಿದ್ದು, ಇಲ್ಲಿ 400 ಮೀಟರ್‌ಗಳ ಸಿಂಥೆಟಿಕ್ ಟ್ರ್ಯಾಕ್ ಇದ್ದು, ಯಾವುದೇ ಓಟದ ಸ್ಪರ್ಧೆ, ಲಾಂಗ್ ಜಂಪ್, ಹೈಜಂಪ್, ಶಾಟ್‌ಪುಟ್, ಜಾವ್ಲಿನ್ ತ್ರೋ ಸೇರಿದಂತೆ ಹಲವು ಕ್ರೀಡಾ ಚಟುವಟಿಕೆಗಳನ್ನು ನಡೆಸುವಷ್ಟು ಸಶಕ್ತವಾಗಿದೆ. ಒಲಿಂಪಿಕ್ ದರ್ಜೆಯ ಆಟಗಳಿಗೆ ಪೂರಕವಾದ ಟ್ರ್ಯಾಕ್ ಎಂಬ ಹೆಗ್ಗಳಿಕೆ ಇದೆ. ಸರಕಾರಿ ಮತ್ತು ಕೆಲವು ಖಾಸಗಿ ಕ್ರೀಡಾ ಚಟುವಟಿಕೆಗಳ ಜತೆಗೆ ಮಂಗಳೂರು ನಗರ, ಗ್ರಾಮಾಂತರ ಭಾಗದ ಅನೇಕ ಶಿಕ್ಷಣ ಸಂಸ್ಥೆಗಳು, ಸಂಘ ಸಂಸ್ಥೆಗಳ ಕ್ರೀಡಾಕೂಟಗಳು ಮಂಗಳಾ ಕ್ರೀಡಾಂಗಣದಲ್ಲಿ ನಡೆಯುತ್ತದೆ. ಇದೀಗ ಎರಡು ತಿಂಗಳ ಕಾಲ ಸ್ಟೇಡಿಯಂ ಮುಚ್ಚುವ ಕಾರಣ ಬೇರೆ ಕ್ರೀಡಾಂಗಣದಲ್ಲಿ ನಡೆಸಬೇಕಾಗಿದೆ. ಕೆಲ ತಿಂಗಳ ಹಿಂದೆ ಮಂಗಳೂರಿನಲ್ಲಿ ನಡೆದ ಕರ್ನಾಟಕ ಕ್ರೀಡಾಕೂಟಕ್ಕೆ ಆಗ ಮಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಂಗಳಾ ಕ್ರೀಡಾಂಗಣ ಅಭಿವೃದ್ಧಿಗೆ 3 ಕೋಟಿ ರೂ. ಅನುದಾನ ಘೋಷಿಸಿ ದ್ದರು. ಬಜೆಟ್‌ನಲ್ಲಿಯೂ ಈ ಬಗ್ಗೆ ಉಲ್ಲೇಖೀಸ ಲಾಗಿದ್ದು, ಇದೇ ಅನುದಾನದಲ್ಲಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲು ನಿರ್ಧರಿಸಲಾಗಿದೆ.