ಉಡುಪಿ: ಕೇಂದ್ರದ ಬಿಜೆಪಿ ಸರ್ಕಾರವು ಮತಗಳವು ಮಾಡುತ್ತಿದೆ ಎಂದು ಆರೋಪಿಸಿ ಉಡುಪಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ನಗರದಲ್ಲಿ ಮಾನವ ಸರಪಳಿ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ನಿಕೇತ್ ರಾಜ್ ಮಾರ್ಯ, 'ನಮ್ಮ ದೇಶಕ್ಕೆ ಬೇಕಾಗಿರುವುದು ಸಂವಿಧಾನ ಮಾತ್ರ, ಅದು ಉಳಿಯಬೇಕಾದರೆ ಚುನಾವಣೆಗಳು ನ್ಯಾಯ ಸಮ್ಮತವಾಗಿ ನಡೆಯಬೇಕು' ಎಂದರು. 'ಮತದಾನವು ನಮ್ಮ ಹಕ್ಕು. ಇಂದು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಮ್ಮ ಈ ಹಕ್ಕನ್ನು ಕಸಿಯಲು ಪ್ರಯತ್ನಿಸುತ್ತಿದೆ' ಎಂದು ಹೇಳಿದರು.
'ಜಾತಿ, ಧರ್ಮ, ದೇವರ ಹೆಸರಿನಲ್ಲಿ ಸಮಾಜವನ್ನು ಒಡೆಯುವ ಮೂಲಕ ಬಿಜೆಪಿಯು ಸಂವಿಧಾನವನ್ನು ನಾಶ ಮಾಡಲು ಪ್ರಯತ್ನಿಸುತ್ತಿದೆ' ಎಂದು ಆರೋಪಿಸಿದರು. ಚಿಂತಕ ಪ್ರೊ. ಫಣಿರಾಜ್ ಮಾತನಾಡಿ, 'ದೇಶದಲ್ಲಿ ಪ್ರಜಾಪ್ರಭುತ್ವ, ಸಹೋದರತೆ ಉಳಿಯಬೇಕಾದರೆ ಸಂವಿಧಾನ ಉಳಿಯಬೇಕು. ಸಂವಿಧಾನದಿಂದ ಮಾತ್ರ ಸಮಾನತೆ ಸಿಗಲು ಸಾಧ್ಯ' ಎಂದರು. ವಿಧಾನಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಐವನ್ ಡಿಸೋಜಾ, ಮುಖಂಡರಾದ ಎಂ.ಎ. ಗಫೂರ್, ಮುನಿಯಾಲು ಉದಯ ಕುಮಾರ್ ಶೆಟ್ಟಿ, ಜ್ಯೋತಿ ಹೆಬ್ನಾರ್ ಉಪಸ್ಥಿತರಿದ್ದರು.