ಉಜಿರೆ: ಧರ್ಮಸ್ಥಳದಲ್ಲಿ ರತ್ನಗಿರಿಯಲ್ಲಿ ವಿರಾಜಮಾನರಾಗಿರುವ ಭಗವಾನ್ ಬಾಹುಬಲಿಸ್ವಾಮಿ ಮೂರ್ತಿಗೆ ಮಂಗಳವಾರ ಬೀಡಿನಿಂದ ರತ್ನಗಿರಿಗೆ ಭವ್ಯ ಅಗ್ರೋದಕ ಮೆರವಣಿಗೆ ಬಳಿಕ ಪಾದಾಭಿಷೇಕ ನಡೆಸಲಾಯಿತು. ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಮತ್ತು ಕ್ಷುಲ್ಲಕ ನಿರ್ವಾಣ ಸಾಗರ ಮಹಾರಾಜರು ಪಾದಾಭಿಷೇಕ ಮಾಡಿದರು. ಮೂರ್ತಿಯ ಪ್ರತಿಷ್ಠಾಪಕರಾದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆಯವರು ಮತ್ತು ಹೇಮಾವತಿ ಹೆಗ್ಗಡೆಯವರು, ಡಿ. ಹರ್ಷೇಂದ್ರ ಕುಮಾರ್, ಸುಪ್ರಿಯಾ ಹರ್ಷೇಂದ್ರ ಕುಮಾರ್, ಸೋನಿಯಾವರ್ಮ, ಪೂರನ್‌ವರ್ಮ ಪಾದಾಭಿಷೇಕ ನೆರವೇರಿಸಿದರು. ಪೂಜಾಮಂತ್ರ ಪಠಣ, ಬಾಹುಬಲಿ ಸೇವಾ ಸಮಿತಿಯ ಸದಸ್ಯರಿಂದ ಸುಶ್ರಾವ್ಯ ಜಿನಭಕ್ತಿ ಗೀತೆಗಳ ಗಾಯನ ಸಮಾರಂಭಕ್ಕೆ ವಿಶೇಷ ಮೆರುಗನ್ನು ನೀಡಿತು.
216 ಕಲಶಗಳಿಂದ ಜಲಾಭಿಷೇಕದ ಬಳಿಕ ಇಕ್ಷುರಸ (ಕಬ್ಬಿನ ಹಾಲು), ಗಂಧ, ಚಂದನ, ಅರಿಶಿನ, ಕ್ಲಕಚೂರ್ಣ ಮೊದಲಾದ ಮಂಗಲದ್ರವ್ಯಗಳಿoದ ಪಾದಾಭಿಷೇಕ ನಡೆಯಿತು. ಪೂರ್ಣಕುಂಭದಿoದ ಪಾದಾಭಿಷೇಕ, ಪುಷ್ಪವೃಷ್ಠಿ, ಮಹಾಮಂಗಳಾರತಿ ಹಾಗೂ ಶಾಂತಿಮoತ್ರ ಪಠಣದೊಂದಿಗೆ ಸಮಾರಂಭ ಸಮಾಪನಗೊಂಡಿತು. ಮಕ್ಕಳಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಬೇಕು, ಇಂದಿನ ಮಕ್ಕಳೆ ಮುಂದಿನ ಸಮಾಜದ ಅಮೂಲ್ಯ ಆಸ್ತಿಯಾಗಿದ್ದು ಬಾಲ್ಯದಿಂದಲೆ ಮನೆಯಲ್ಲಿ ಅವರಿಗೆ ಉತ್ತಮ ಧಾರ್ಮಿಕ ಸಂಸ್ಕಾರ ನೀಡಿ ಸಮಾಜದ ಸಭ್ಯ, ಸುಸಂಸ್ಕೃತ ನಾಗರಿಕರನ್ನಾಗಿ ರೂಪಿಸಬೇಕು ಎಂದು ಮಂಗಲಪ್ರವಚನ ನೀಡಿದ ಕಾರ್ಕಳ ಜೈನಮಠದ ಪೂಜ್ಯ ಲಲಿತಕೀರ್ತಿ ಭಟ್ಟಾರಕ ಸ್ವಾಮೀಜಿ ಹೇಳಿದರು.
ಬಾಹುಬಲಿಯ ತ್ಯಾಗ, ಅಹಿಂಸೆ ವಿಶ್ವಮಾನ್ಯವಾಗಿದೆ. ಮೊದಲು ನಮ್ಮನ್ನು ನಾವು ಅರಿತುಕೊಂಡು, ಜೈನಧರ್ಮದ ಮರ್ಮವನ್ನರಿತು ವೃತ-ನಿಯಮಗಳ ಪಾಲನೆಯೊಂದಿಗೆ ಆದರ್ಶ ಜೀವನ ನಡೆಸಬೇಕು. ಮಕ್ಕಳು ನಮ್ಮ ಉತ್ತರಾಧಿಕಾರಿಗಳಾಗಿದ್ದು ಅವರಿಗೆ ಉತ್ತಮ ಸಂಸ್ಕಾರ ನೀಡಬೇಕು ಎಂದು ಸ್ವಾಮೀಜಿ ಸಲಹೆ ನೀಡಿದರು. ಕ್ಷುಲ್ಲಕ ನಿರ್ವಾಣ ಸಾಗರ ಮಹಾರಾಜರು ಮಾತನಾಡಿ, ಜೈನಧರ್ಮದ ಸಾರವಾದ ಸಮ್ಯಕ್‌ದರ್ಶನ, ಸಮ್ಯಕ್‌ಜ್ಞಾನ ಮತ್ತು ಸಮ್ಯಕ್‌ಚಾರಿತ್ರ್ಯ ಎಂಬ ತ್ರೆರತ್ನಗಳ ಪಾಲನೆಯಿಂದ ಮೋಕ್ಷ ಪ್ರಾಪ್ತಿ ಸಾಧ್ಯವಾಗುತ್ತದೆ ಎಂದರು. ಕನ್ನಡ ಉಪನ್ಯಾಸಕ ಮಹಾವೀರ ಜೈನ್ ಇಚಿಲಂಪಾಡಿ ಕಾರ್ಯಕ್ರಮ ನಿರ್ವಹಿಸಿದರು.